ಸೋಲಿಗರು
	ಕರ್ನಾಟಕ ರಾಜ್ಯದ ಪ್ರಮುಖ ಬುಡಕಟ್ಟುಗಳ ಪೈಕಿ ಒಂದು. ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟ, ಬೂದಿಪಡಗ, ಮಾದೇಶ್ವರ ಬೆಟ್ಟ, ಬೈಲೂರು ಕಾಡುಗಳಲ್ಲಿ ಇವರ ವಾಸ. ಸೋಲಿಗರ ಮೂಲದ ಬಗೆಗೆ ಹಲವಾರು ದಂತಕಥೆಗಳಿವೆ. ಕಾರಯ್ಯ, ಮಾದೇಶ್ವರ ಅಣ್ಣತಮ್ಮಂದಿರು ಎಂದೂ ಒಮ್ಮೆ ಇವರಿಬ್ಬರು ಸಾವಣನೆಂಬ ರಕ್ಕಸನ ಕೈಗೆ ಸಿಕ್ಕಿಬಿದ್ದಾಗ ರಕ್ಕಸನು ಮಾದೇಶ್ವರನಿಂದ ಒಂದು ಜೊತೆ ಜೋಡುಗಳನ್ನು ಬಯಸಿದನೆಂದೂ ಮಾದೇಶ್ವರ ಉಪಾಯದಿಂದ ಅವನನ್ನು ಕೊಂದನೆಂದೂ ಪ್ರತೀತಿ. ಈಗಲೂ ಸೋಲಿಗರು ನಾವು ಕಾರಯ್ಯನ ಮಕ್ಕಳೆಂದು ಹೇಳಿಕೊಳ್ಳುತ್ತಾರೆ. ಇವರದು ಇಂದಿಗೂ ಅತ್ಯಂತ ಕಠಿಣ ಬದುಕು. 

	ಸೋಲಿಗರು ವಲಸೆಗಾರರು, ಒಂದೇ ಸ್ಥಳದಲ್ಲಿ ಜೀವನವಿಡೀ ವಾಸಿಸುವುದಿಲ್ಲ. ಮುಖ್ಯ ಕಸಬು ಬೇಸಾಯ. ಚೆನ್ನಾಗಿ ಫಸಲು ಕೊಡುವ ಸ್ಥಳಗಳನ್ನು ಆಯ್ದುಕೊಂಡು ಗುಂಪುಗಳಲ್ಲಿ ವಾಸಮಾಡುತ್ತಾರೆ. ರಾಗಿಹಿಟ್ಟು, ಅಂಬಲಿ, ಕಾಡಿನಲ್ಲಿ ದೊರೆಯುವ ಕಂದಮೂಲಾದಿ ಫಲಗಳೇ ಇವರ ದಿನನಿತ್ಯದ ಉಣಿಸು. ಜೇನುತುಪ್ಪ, ಅಳಲೆಕಾಯಿ, ನೆಲ್ಲಿಕಾಯಿ, ಶುಂಠಿ, ಜಿಂಕೆಕೊಂಬು, ಪ್ರಾಣಿ ಚರ್ಮ ಮಾರಿ ತಮಗೆ ಬೇಕಾದ ಪದಾರ್ಥಗಳನ್ನು ಕೊಂಡುಕೊಳ್ಳುತ್ತಾರೆ. 

	ಸೋಲಿಗರಲ್ಲಿ ಉರಾಳಿಸೋಲಿಗ, ಮರ ಸೋಲಿಗ, ಕಾಡು ಸೋಲಿಗ, ಉದುಕತ್ತಿ ಸೋಲಿಗ, ಬುರುಡೆ ಸೋಲಿಗ ಎಂಬ ಒಳಪಂಗಡಗಳಿವೆ. ಇವರ ವಿವಾಹ ಪದ್ಧತಿ ತುಂಬ ಸರಳ. ಗಂಡು ಹೆಣ್ಣು ಮೆಚ್ಚಿ ಕೆಲಕಾಲ ಕಾಡಿನಲ್ಲಿ ಕಣ್ಮರೆಯಾಗಿ ತಮ್ಮ ಪೋಡಿಗೆ ವಾಪಸಾಗಿ ಕುಲಕ್ಕೆ ಊಟ ಹಾಕಿಸಿದರೆ ಹೊಸ ದಂಪತಿಗಳನ್ನು ಹಿರಿಯರು ಒಪ್ಪಿಕೊಂಡು ಅವರನ್ನು ಆಶೀರ್ವದಿಸುತ್ತಾರೆ. ಬುಡಕಟ್ಟಿನಲ್ಲಿ ಉಂಟಾಗುವ ವಾದವಿವಾದಗಳನ್ನು ತೀರ್ಮಾನಿಸುವವನು ಪೋಡಿನ ಯಜಮಾನ. 

	ಸೋಲಿಗರು ಮಹಾದೈವಭಕ್ತರು. ಬಿಳಿಗಿರಿರಂಗನಾಥಸ್ವಾಮಿ ಇವರ ಆರಾಧ್ಯದೈವ. ಸ್ವಾಮಿಯ ಹಬ್ಬ ಉತ್ಸವಗಳಲ್ಲಿ ಹರ್ಷದಿಂದ ಭಾಗವಹಿಸುತ್ತಾರೆ. ಸೋಲಿಗರ ಬೊಮ್ಮಗೌಡನ ಮಗಳು ಕುಸುಮಾಲೆ ಯನ್ನು ರಂಗನಾಥಸ್ವಾಮಿ ಮದುವೆಯಾಗಿದ್ದರಿಂದ ರಂಗನಾಥಸ್ವಾಮಿ ತಮಗೆ ಭಾವನಾಗಬೇಕು ಎಂದು ಹೇಳುತ್ತಾರೆ. ಜಡೆಸ್ವಾಮಿ, ಕಾರಯ್ಯ, ಹುಲೀರಪ್ಪ, ಬಿಲ್ಲಯ್ಯ, ಮಾದೇಶ್ವರ ಆಯಾಯ ಮನೆತನಗಳಿಗೆ ಪೂಜ್ಯದೈವಗಳು. 

	ವರ್ಷಕ್ಕೊಂದು ಬಾರಿ ಕ್ಯಾತೇದೇವರ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸುತ್ತಾರೆ. ಈ ಸಂದರ್ಭದಲ್ಲಿ ಮಾಡುವ ಕುಣಿತ ಬಲು ಆಕರ್ಷಕ. ಇದರಲ್ಲಿ 20-25ಮಂದಿ ಭಾಗವಹಿಸುತ್ತಾರೆ. ವಿಶೇಷ ವೇಷಭೂಷಣಗಳೇನೂ ಇರುವುದಿಲ್ಲ. ಚಡ್ಡಿ ಅಥವಾ ಪಂಚೆ, ಬನಿಯನ್ ಇಲ್ಲವೆ ಅಂಗಿ. ಕೆಲವು ಸಾರಿ ಬರಿ ಚಡ್ಡಿ ಹಾಕಿ ಮೈಗೆ ಸೊಪ್ಪನ್ನು ಕಟ್ಟಿಕೊಂಡು ಕುಣಿಯುತ್ತಾರೆ. ಧಾರ್ಮಿಕ ಚೌಕಟ್ಟಿನಲ್ಲಿ ಈ ಕಲೆ ಬೆಳೆದುಬಂದರೂ ಹವ್ಯಾಸಿಕಲೆಯಾಗಿ ಮನರಂಜನೆ ನೀಡುತ್ತ ಬಂದಿರುವುದು ವಿಶೇಷ. 

	ಸೋಲಿಗರ ಸಂಪ್ರದಾಯಗಳು ವಿಶಿಷ್ಟವಾಗಿವೆ. ಸೋಲಿಗರ ಗರ್ಭಿಣಿ ಹೆಂಗಸು ಹೆರಲು ಒಂದು ವಾರವಿರುವಾಗಲೇ ಅವಳ ಗಂಡ ಮೂರು ದಿನದ ಬುತ್ತಿಯೊಡನೆ ಅವಳನ್ನು ಕಾಡಿನೊಳಗೆ ಬಿಟ್ಟುಬರುತ್ತಾನೆ. ಮಗು ಹುಟ್ಟುವತನಕ ಅವಳು ಮನೆಗೆ ಬರುವಂತಿಲ್ಲ. ಮಗುವಿನೊಂದಿಗೆ ಮರಳಿ ಬಂದರೆ ಅವಳ ಗೌರವಾರ್ಥವಾಗಿ ತಮ್ಮಟೆ ಬಡಿದು ಸ್ವಾಗತಿಸುತ್ತಾರೆ. ಮಗುವಿಗೆ ಐದು ದಿನ ತುಂಬಿದ ಮೇಲೆ ಕುಲದ ಯಜಮಾನನಿಂದ ತಮಗೆ ಇಷ್ಟವಾದ ಹೆಸರನ್ನು ಕರೆಸುತ್ತಾರೆ. 

	ಇವರಲ್ಲಿ ವಿಧವಾ ವಿವಾಹಪದ್ಧತಿ ಇದೆ. ವಿಧವೆ ಮದುವೆಯಾಗುವ ಸಂದರ್ಭದಲ್ಲಿ ಪೋಡಿನ ಹತ್ತು ಸಮಸ್ತರ ಎದುರಿನಲ್ಲಿ ಕಡ್ಡಿ ಮುರಿದು, ಆ ತುಂಡುಗಳನ್ನು ಗಂಡನ ಸಂಬಂಧಿಗಳಿಗೆ ತಾಳಿಯೊಡನೆ ಒಪ್ಪಿಸಿ ಬಿಡುತ್ತಾಳೆ. ಅವಳನ್ನು ವಿವಾಹವಾಗುವ ಪುರುಷ ಅವಳ ಮುಂಚಿನ ಮಕ್ಕಳನ್ನು ಸಹ ಪ್ರೀತಿಯಿಂದ ಸಾಕುತ್ತಾನೆ. ದುರ್ಬರ ಬದುಕನ್ನು ನಡೆಸುತ್ತಿರುವ ಇವರ ಅಭಿವೃದ್ಧಿಗಾಗಿ ಸರ್ಕಾರ, ಸಂಘಸಂಸ್ಥೆಗಳು ಅನೇಕ ಯೋಜನೆಗಳನ್ನು ರೂಪಿಸಿವೆ. ಇತ್ತೀಚಿನ ದಿನಗಳಲ್ಲಿ ಇವರಲ್ಲಿ ಕೆಲವರು ಅಕ್ಷರಸ್ಥರಾಗುತ್ತಿದ್ದಾರೆ. ಸೋಲಿಗರನ್ನು ಕುರಿತು ಚಂದ್ರು ಕಾಳೇನಹಳ್ಳಿಯವರು ಸಾಂಸ್ಕøತಿಕ ಅಧ್ಯಯನ ಮಾಡಿದ್ದಾರೆ (1992). ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ ಸೋಲಿಗರಿಗೆ ಆರೋಗ್ಯ, ಶಿಕ್ಷಣಗಳನ್ನು ನೀಡುವ ನಿಟ್ಟಿನಲ್ಲಿ ಕೆಲಸಮಾಡುತ್ತಿದೆ.		
		(ಎಂ.ಆರ್.ಇ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ